ಡಿಮೀಟ್ರಿಯಸ್ (ಬ್ಯಾಕ್ಟ್ರಿಯದ)

	ಬ್ಯಾಕ್ಟ್ರಿಯದ ದೊರೆ. ಯುತಿಡೆಮಸನ ಮಗ. ಇವನ ಕಾಲಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಡಬ್ಲ್ಯೂ. ಡಬ್ಲ್ಯೂ. ಟ್ಯಾರ್‍ನ್ ಪ್ರಕಾರ ಈತ ಕ್ರಿ.ಪೂ. 190-167ರಲ್ಲಿ ಆಳ್ವಿಕೆ ನಡೆಸಿ ಭಾರತದ ವಾಯುವ್ಯ ಭಾಗಗಳ ಮೇಲೆ ದಂಡೆತ್ತಿ ಬಂದು ವಿಶಾಲ ಪ್ರದೇಶವನ್ನು ವಶಪಡಿಸಿಕೊಂಡ. ಎ. ಕೆ. ನಾರಾಯಣರ ಪ್ರಕಾರ ಭಾರತಕ್ಕೆ ಬಂದಿದ್ದ ಡಿಮೀಟ್ರಿಯಸ್ ಕ್ರಿ.ಪೂ. 180ರಿಂದ 165ರ ವರೆಗೆ ಆಳ್ವಿಕೆ ನಡೆಸಿದ. ಡಿಮೀಟ್ರಿಯಸ್ ತನ್ನ ಮೂವತ್ತೈದನೆಯ ವಯಸ್ಸಿನಲ್ಲಿ ವಿಶಾಲ ಬ್ಯಾಕ್ಟ್ರಿಯದ ಸಮ್ರಾಟನಾದ. ಆ ವೇಳೆಗೆ ಬ್ಯಾಕ್ಟ್ರಿಯ ಪ್ರಬಲವಾಗಿದ್ದು ಸಮೃದ್ಧಿಯ ಬೀಡಾಗಿತ್ತು. ಭಾರತದ ವಾಯುವ್ಯ ಪ್ರದೇಶಗಳ ರಾಜಕೀಯ ಪರಿಸ್ಥಿತಿ ಹದಗೆಟ್ಟಿತ್ತು. ಈ ಸಂಗತಿಯನ್ನು ಗಮನಿಸಿದ ಡಿಮೀಟ್ರಿಯಸ್ ಆ ಪ್ರದೇಶದ ಮೇಲೆ ದಂಡಯಾತ್ರೆ ಕೈಗೊಂಡು ಪಂಜಾಬ್ ಮತ್ತು ಸಿಂಧೂ ಪ್ರದೇಶವನ್ನು ಆಕ್ರಮಿಸಿಕೊಂಡ. ಸಿಂಧೂ, ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ಅವನ ಅಧೀನವಾದುವೆಂದು ಸ್ಟ್ರಾಬೋನ ಬರೆವಣಿಗೆಯಿಂದ ವೇದ್ಯವಾಗುತ್ತದೆ. ಅಲ್ಲದೆ ಯವನ ಪಡೆಗಳು ಸಾಕೇತವನ್ನು ಮುತ್ತಿ ವಶಪಡಿಸಿಕೊಂಡಿದ್ದುವೆಂದು ಯುಗ ಪುರಾಣದಿಂದ ತಿಳಿದು ಬರುತ್ತದೆ. ಗೆದ್ದ ಪ್ರದೇಶಗಳಲ್ಲಿ ಡಿಮೀಟ್ರಿಯಸ್ ತನ್ನ ಹೆಸರಿನಲ್ಲಿ ಹೊಸ ಪಟ್ಟಣಗಳನ್ನು ಸ್ಥಾಪಿಸಿ ಗ್ರೀಕ್ ಪಡೆಗಳನ್ನು ನೆಲೆಗೊಳಿಸಿದ. ಡಿಮೀಟ್ರಿಯಸ್ ಸಾಮ್ರಾಜ್ಯ ಆಫ್ಘಾನಿಸ್ತಾನ, ಬಲೂಚಿಸ್ತಾನ, ಪಂಜಾಬ್ ಮತ್ತು ಸಿಂಧೂ ಪ್ರದೇಶಗಳು ಮತ್ತು ರಷ್ಯನ್ ಹಾಗೂ ಚೀನೀ ತುರ್ಕಿಸ್ತಾನಗಳನ್ನೊಳಗೊಂಡಿತ್ತು. ಡಿಮೀಟ್ರಿಯಸನ ನಾಣ್ಯಗಳು ಗ್ರೀಕ್ ಮತ್ತು ಪ್ರಾಕೃತ ಭಾಷೆಗಳ ಬರವಣೆಗೆಯಿಂದ ಕೂಡಿವೆ. 

	ಡಿಮೀಟ್ರಿಯಸನ ಅಂತ್ಯದ ವಿಷಯ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಇವನು ಭಾರತದಲ್ಲಿದ್ದಾಗ ಬ್ಯಾಕ್ಟ್ರಿಯದ ಯೂಕ್ರೆಟೈಡ್ಸ್ ಎಂಬುವನು ದಂಗೆಯೆದ್ದನೆಂದೂ ಅವನನ್ನು ಅಡಗಿಸಲು ಡಿಮೀಟ್ರಿಯಸ್ ಹಿಂದಿರುಗಿದನೆಂದೂ ತಿಳಿದು ಬರುತ್ತದೆ. ಇವನು ಹಿಂದಿರುಗುವ ಮುನ್ನ ಭಾರತದಲ್ಲಿ ರಾಜ್ಯ ವಿಸ್ತರಿಸುವ ಕಾರ್ಯವನ್ನು ತನ್ನ ನೆಚ್ಚಿನ ದಳಪತಿಗಳಾದ ಮಿನಾಂಡರ್ ಮತ್ತು ಅಪಲೋಡೋಟಸ್ ಎಂಬವರಿಗೆ ವಹಿಸಿದ. ಡಿಮೀಟ್ರಿಯಸ್ ಬ್ಯಾಕ್ಟ್ರಿಯಕ್ಕೆ ಹಿಂದಿರುಗಿ ಯೂಕ್ರೆಟೈಡ್ಸನನ್ನು ಎದುರಿಸಿ ಪರಾಭವಗೊಂಡು ಅಲ್ಲೇ ಮರಣಹೊಂದಿದನೆಂಬುದಾಗಿ ಕೆಲವು ಮೂಲಗಳಿಂದ ತಿಳಿದುಬಂದರೆ, ಅವನು ಯೂಕ್ರೆ ಟೈಡ್ಸನಿಂದ ಸೋತು ಭಾರತಕ್ಕೆ ಹಿಂದಿರುಗಿ ಅನಂತರ ಮರಣಹೊಂದಿದನೆಂದು ಇನ್ನು ಕೆಲವು ಮೂಲಗಳಿಂದ ತಿಳಿದುಬರುತ್ತದೆ. ಡಿಮೀಟ್ರಯಸನ ಮಗಳಾದ ಅಗತೋಕ್ಲಿಸಳನ್ನು ವಿವಾಹವಾಗಿದ್ದ ಮಿನಾಂಡರ್ ಅವನು ವಶಪಡಿಸಿಕೊಂಡಿದ್ದ ವಾಯುವ್ಯ ಪ್ರದೇಶಗಳ ದೊರೆಯಾದ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ